About Us

Home / About Us

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಮಾಹಿತಿ: 1860 ಕ್ಕಿಂತ ಮೊದಲು ಬ್ರಿಟಿಷ್ ಭಾರತದಲ್ಲಿ ಪೊಲೀಸ್ ಇತಿಹಾಸವೆಂದರೆ ಅದು ಸಾಮಾನ್ಯ ಆಡಳಿತಾಂಗದ ಭಾಗವಾಗಿತ್ತು. ಆಗಿಂದಾಗ್ಗೆ ಹಲವಾರು ಅಪಯಶಸ್ಸನ್ನು ಕಂಡ ಪ್ರಯೋಗಗಳಿಂದ ಕೂಡಿತ್ತು. ಸಾಮಾನ್ಯ ಆಡಳಿತದ ಭಾಗವಾಗಿದ್ದ ಪೊಲೀಸ್ ಇಲಾಖೆ ಕಲೆಕ್ಟರ್‌ನ ನಿಯಂತ್ರಣದಲ್ಲಿತ್ತು. ಈ ಭಾಗದಲ್ಲಿ ಸರ್. ಥಾಮಸ್ ಮನ್ರೋ ಹಲವಾರು ಪ್ರಯೋಗಗಳನ್ನು ಮಾಡಿದ. 1816 ರ ನಂತರ ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಪೊಲೀಸ್ ಪಡೆ ಅಸ್ತಿತ್ವಕ್ಕೆ ಬಂತು. 1856 ರಿಂದ 1860 ರ ವೇಳೆಗೆ ಒಂದು ಪೂರ್ಣಪ್ರಮಾಣದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಂಘಟಿಸಲಾಯಿತು. ನಂತರದ ದಿನಗಳಲ್ಲಿ ಈ ಇಲಾಖೆಯನ್ನು ಕಂದಾಯ ಹಾಗೂ ಮ್ಯಾಜಿಸ್ಟ್ರಿಯಲ್ ಇಲಾಖೆಗಳಿಂದ ಪ್ರತ್ಯೇಕಗೊಳಿಸಲಾಯಿತು. ಪೊಲೀಸರನ್ನು ಕಂದಾಯ ಇಲಾಖೆಯ ಅಧಿಕಾರ ಮತ್ತು ಕರ್ತವ್ಯಗಳಿಂದ ದೂರವಿರಿಸಲಾಯಿತು.

18 ನೇ ಶತಮಾನದ ಮದ್ಯಭಾಗದವರೆಗೆ ಪೊಲೀಸರು ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದರು. ಅವರ ಕರ್ತವ್ಯಗಳ ಸ್ವರೂಪಗಳ ಬಗ್ಗೆ ನಿರ್ದಿಷ್ಟವಾದ ವ್ಯಾಖ್ಯಾನವಿರಲಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೆಚ್ಚುತ್ತಾ ಹೋದಂತೆ ಬ್ರಿಟೀಷರು ಪೊಲೀಸರ ಕರ್ತವ್ಯಗಳ ಸ್ವರೂಪಗಳನ್ನು ನಿಗದಿಗೊಳಿಸುತ್ತಾ ಬಂದರು.  ಈ ಪ್ರಾಂತ್ಯದಲ್ಲಿ ಬೆಳೆಯುತ್ತಿರುವ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಒಂದು ಸಂಘಟಿತವಾದ ಪೊಲೀಸ್ ವ್ಯವಸ್ಥೆ ಜನ್ಮ ತಾಳಿದ್ದು ೧೮೫೬ ರಲ್ಲಿ ಎನ್ನಬಹುದು. ಅಲ್ಲಿಯವರೆಗೆ ಪ್ರಾಚೀನ ಸಾಂಪ್ರದಾಯಿಕ ಪೊಲೀಸ್ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಹಾಗೂ ಅಪರಾಧ ತಡೆ ಮತ್ತು ಪತ್ತೆ ಹಾಗೂ ಶಾಂತಿ ಕಾಪಾಡುವುದು ಇವರ ಕರ್ತವ್ಯಗಳೆಂದು ನಿಗದಿಪಡಿಸಿ ಉಳಿದ ಕರ್ತವ್ಯಗಳಿಂದ ವಿಮುಕ್ತಿಗೊಳಿಸಲಾಯಿತು. 1802 ರ  35ನೇ ಮದ್ರಾಸ್ ರೆಗ್ಯುಲೇಷನ್ ಕಾಯಿದೆ ಪ್ರಕಾರ ಮದ್ರಾಸ್ ಪ್ರಾಂತ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ವಾಸ್ತವವಾಗಿ ಬಂಗಾಳದ ಪೊಲೀಸ್ ವ್ಯವಸ್ಥೆಯನ್ನು ಇಲ್ಲಿಯೂ ಜಾರಿಗೆ ತರಲಾಯಿತು. ಪ್ರತಿ ಜಿಲ್ಲೆಯನ್ನು 2೦ ಚದರ ಮೈಲಿಗೊಂದರಂತೆ ವಿಭಾಗಗಳಾಗಿ ವಿಂಗಡಿಸಲಾಯಿತು. ಇಂತಹ ಪ್ರತಿ ವಿಭಾಗಗಳಿಗೆ ದರೋಗ ಎಂಬ ಹೆಸರಿನ ಒಬ್ಬ ಅಧಿಕಾರಿ ಮತ್ತು ಒಬ್ಬ ಥಾಣಾದಾರ ಎಂಬವರನ್ನು ನೇಮಿಸಲಾಯಿತು. ಇವರ ಕೈಕೆಳಗೆ 20 ರಿಂದ 5೦ ಜನ ಸಶ್ತ್ರಧಾರಿ ಪೊಲೀಸರು ಇರುತ್ತಿದ್ದರು.

The Imperial Gazetteer of India (1908) ಇದರ ಪ್ರಕಾರ ಮದ್ರಾಸ್ ಪ್ರಾಂತ್ಯದಲ್ಲಿ 1904 ನೇ ಇಸವಿಯ ಸಮಯಕ್ಕೆ 6 ಚದರ ಮೈಲಿಗೆ ಮತ್ತು ೧೫೫೮ ಜನಸಂಖ್ಯೆಗೆ ಒಬ್ಬರಂತೆ ಒಂದು ಪೊಲೀಸ್ ಬಲವನ್ನು ಹೊಂದಲಾಗಿತ್ತು. ಶತಮಾನದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಸೌತ್ ಕೆನರಾ ಎಂಬುದಾಗಿ ಕರೆಯಲಾಗುತ್ತಿತ್ತು ಮತ್ತು ಕಾಸರಗೋಡು ತಾಲೂಕು ಹಾಗೂ ಹೊಸದುರ್ಗಾ ಉಪತಾಲೂಕನ್ನು ಒಳಗೊಂಡಿತ್ತು.  ಮದ್ರಾಸ್ ಪ್ರಾಂತ್ಯದ ಪ್ರಧಾನ ಕೇಂದ್ರ ಮದ್ರಾಸ್‌ನ ಫೋರ್ಟ್ ಸೈಂಟ್ ಜಾರ್ಜ್ ಆಗಿತ್ತು.  ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರು ಮದ್ರಾಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರಾಗಿದ್ದರು.

ಮದ್ರಾಸ್ ಪ್ರಾಂತ್ಯವು 26 ಜಿಲ್ಲೆಗಳನ್ನು 4 ರೇಂಜ್‌ಗಳಾಗಿ ವಿಂಗಡಿಸಿ ಪ್ರತಿಯೊಂದು ರೇಂಜ್‌ಗೂ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ರವರು ಮುಖ್ಯಸ್ಥರಾಗಿದ್ದರು.  ಆ ಸಮಯದಲ್ಲಿ ಸೌತ್ ಕೆನರಾ ಜಿಲ್ಲೆಯು ಪಶ್ಚಿಮ ವಲಯಕ್ಕೆ ಒಳಗೊಂಡಿದ್ದು, ಕೊಯಂಬುತ್ತೂರು ಇದರ ಕೇಂದ್ರಸ್ಥಾನವಾಗಿತ್ತು.  ಸೌತ್ ಕೆನರಾ ಜಿಲ್ಲೆಯ (ಈಗಿನ ದಕ್ಷಿಣ ಕನ್ನಡ ಜಿಲ್ಲೆ) ಪೊಲೀಸ್ ಬಲದ ಮುಖ್ಯಸ್ಥರಾಗಿ ಪೊಲೀಸ್ ಅಧೀಕ್ಷಕರನ್ನು ನೇಮಿಸಿದ್ದು, ಅವರ ಕೇಂದ್ರಸ್ಥಾನ ಮಂಗಳೂರು ಆಗಿದ್ದಿರುತ್ತದೆ.  ಆ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಬಲದಲ್ಲಿ 10 ಪೊಲೀಸ್ ಇನ್ಸ್‌ಪೆಕ್ಟರ್‍ಸ್, 558 ಪೊಲೀಸ್ ಕಾನ್ಸ್‌ಟೆಬಲ್ಸ್ ಇದ್ದು, ಒಟ್ಟು50 ಪೊಲೀಸ್ ಠಾಣೆಗಳನ್ನು ಹೊಂದಿತ್ತು.

ದಿನಾಂಕ 04-10-1860 ರಿಂದ ಇಂದಿನವರೆಗೆ ದ.ಕ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಒಟ್ಟು 129 ಅಧಿಕಾರಿಗಳು ಸೇವೆ ಸಲ್ಲಿಸಿದ್ದು, ಹಾಲಿ ಇರುವ ಪೊಲೀಸ್ ಅಧೀಕ್ಷಕರು 130 ನೇಯವರಾಗಿರುತ್ತಾರೆ.  ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚಿನ ಅವಧಿಯಲ್ಲಿ ಬ್ರಿಟೀಷ್ ಅಧಿಕಾರಿಗಳು ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಭಾರತೀಯ ಪೊಲೀಸ್ ಅಧೀಕ್ಷಕರಾಗಿ ಶ್ರೀಯುತ. ಎ. ಸುಬ್ಬರಾವ್ ಇವರು ದಿನಾಂಕ: 24-03-1911 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ಪಟ್ಟಿಯ ಸೂಚನಾ ಫಲಕದ ಛಾಯಾಚಿತ್ರವನ್ನು ಈ ಕೆಳಗೆ ನೀಡಲಾಗಿದೆ. Click here for Officers Till Date

ಪ್ರಾರಂಭದಲ್ಲಿ ಅವಿಭಜಿತ ದ.ಕ. ಜಿಲ್ಲೆ (ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಒಳಗೊಂಡಂತೆ) ಕಾರ್ಯನಿರ್ವಹಿಸುತ್ತಿದ್ದು 1997 ರಲ್ಲಿ ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಪೊಲೀಸ್ ಘಟಕಗಳು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ. ತದನಂತರ 2010 ರಲ್ಲಿ ದ.ಕ ಜಿಲ್ಲೆಯಿಂದ ಮಂಗಳೂರು ನಗರವನ್ನು ಪ್ರತ್ಯೇಕಿಸಿ ಮಂಗಳೂರು ನಗರ  ಪೊಲೀಸ್ ಕಮೀಷನರೇಟ್‌ನ್ನು ಸೃಜಿಸಲಾಯಿತು.